ಪಾಕ್ ಜಲಸಂಧಿ -
ಶ್ರೀಲಂಕಾದ ಉತ್ತರತಮ ತುದಿಗೂ ಭಾರತದ ಆಗ್ನೇಯ ತೀರಕ್ಕೂ ನಡುವೆ ಇರುವ ಕಿರಿದಾದ ಕಡಲ್ಗಾಲುವೆ, ಜಲಸಂಧಿ. ಅದರ ದಕ್ಷಿಣಕ್ಕೆ ಆಡಮ್ಸ್ ಬ್ರಿಜ್, ಮನ್ನಾರ್ ದ್ವೀಪ ಮತ್ತು ಮನ್ನಾರ್ ಖಾರಿ ಇವೆ. ಆಡಮ್ಸ್ ಬ್ರಿಜ್ ಎಂಬುದು ದಿಬ್ಬಗಳ ಸಾಲು. ಶ್ರೀ ರಾಮ ಲಂಕೆಗೆ ಹೋಗಲು ಕಟ್ಟಿದ ಸೇತುಬಂಧನವೇ ಇದು ಎಂದು ನಂಬಿಕೆಯಿದೆ. ಆಡಮ್ಸ್ ಬ್ರಿಜ್‍ನ ಪೂರ್ವಕ್ಕೆ ಮನ್ನಾರ್ ದ್ವೀಪವಿದೆ. ಮನ್ನಾರ್ ದ್ವೀಪದ ಉತ್ತರಕ್ಕೆ ಇರುವ ಕಡಲ ಚಾಚು ಪಾಕ್ ಕೊಲ್ಲಿ, 1763-66ರಲ್ಲಿ ಮದರಾಸಿನ ಗವರ್ನರ್ ಆಗಿದ್ದ ಸರ್ ರಾಬರ್ಟ್ ಪಾಕನ ಹೆಸರು ಈ ಜಲಸಂಧಿಗೆ ಬಂದಿದೆ. ಸೇತುಬಂಧನದ ಪಶ್ಚಿಮಕ್ಕೆ ಪಾಕ್ ಜಲಸಂಧಿಗೂ ಮನ್ನಾರ್ ಖಾರಿಗೂ ನಡುವೆ ದಕ್ಷಿಣ ಭಾರತದ ಪುಣ್ಯಕ್ಷೇತ್ರವಾದ ರಾಮೇಶ್ವರ ದ್ವೀಪವಿದೆ. ಪಾಕ್ ಜಲಸಂಧಿಯ ಅಗಲ 64 ಕಿಮೀ.-137 ಕಿಮೀ. ಉದ್ದ  137 ಕಿಮೀ, ಶ್ರೀಲಂಕಾದ ಕೆಲವು ನದಿಗಳು ಮತ್ತು ಭಾರತದ ವೈಗೈ ನದಿ ಈ ಜಲಸಂಧಿಯಲ್ಲಿ ಕಡಲನ್ನು ಸೇರುತ್ತದೆ. ಜಲಸಂಧಿಯಲ್ಲಿ ಶ್ರೀಲಂಕಾದ ಹಲವು ದ್ವೀಪಗಳಿವೆ. ಇಲ್ಲಿ ಕಡಲು ಆಳವಾಗಿಲ್ಲ. ಇದು ದೊಡ್ಡ ಹಡಗುಗಳ ಸಂಚಾರಕ್ಕೆ ಅನುಕೂಲವಾಗಿಲ್ಲ. ಶ್ರೀಲಂಕಾದ ಜಾಫ್ನಾ ರೇವಿಗೂ ದಕ್ಷಿಣ ಭಾರತಕ್ಕೂ ನಡುವೆ ವ್ಯಾಪಾರ ಸಂಪರ್ಕವಿದೆ. ಸರಕುಗಳನ್ನು ಹೊತ್ತ ಸಣ್ಣ ಹಡಗುಗಳು ಸಂಚರಿಸುತ್ತವೆ.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ